ಭಾನುವಾರ, ಮಾರ್ಚ್ 8, 2020


ಹೆಣ್ಣು ಎಂಬ ಹೊನ್ನು ನೀನು
ಸೃಷ್ಟಿ ಮೂಲಕೆ ಒಡತಿ ನೀನು
ಹಸಿರ ಸಿರಿಗು ಉಸಿರು ನೀಡೋ
ಬಾಳ ಬಂಡಿಯ ಗಾಲಿ ನೀನು

ಶಾಂತ ಮೂರ್ತಿ ಪ್ರೀತಿಗರಸಿ
ನಗುವೇ ನಿನ್ನ ಒಡವೆಯೂ
ಶೌರ್ಯದಲ್ಲಿ ವೀರ ವನಿತೆ
ಧೈರ್ಯದಿಂದೆ ನಡೆಯಲು

ಚಿತ್ತದಲ್ಲಿ ಬುದ್ಧಿಯು
ಅಂತರಂಗ ಶುದ್ಧಿಯು
ಕೆಲಸವೇನೆ ಇದ್ದರೂ
ಇಲ್ಲ ನಿನಗೆ ಸಾಟಿಯೂ

ಅಬಲೆಗಿಲ್ಲಿ ರಕ್ಷೆಯಿದೆ
ತುತ್ತು ನೀಡೋ ಮನಸು ಇದೆ
ಜಗದ ಜನರ ಕಣ್ಣು ತೆರೆಸೋ
ಸಾಮರ್ಥ್ಯವು ನಿನಗಿದೇ

ಗಿರಿ ಶೃಂಗದ ಮೇಲೆಯೂ
ನಭಕೆ ಹಾರೋ ವೇಳೆಯೂ
ನೀರ ಮೇಲೆಯೂ ಸಾಗೋ
ಶಿಸ್ತಿನಾ ಸಿಪಾಯಿಯೂ

ಬತ್ತದಿರಲಿ ಪ್ರೀತಿ ಗಂಗೆ
ನಿನ್ನ ಜೀವ ಸೆಲೆಯಲೀ
ನಾಡು ಪ್ರಗತಿ ಕಾಣಲಿ
ನಿನ್ನ ರಕ್ಷೆ ಗೂಡಲಿ

ಬೆಲೆಯ ಕಟ್ಟಲಾದಿತೇ
ನಿನ್ನ ಕೆಲಸ ಕಾರ್ಯಕೇ
ನಿನ್ನ ನಂಬಿ ಬರುವವರಿಗೆ
ನೀನೆ ಅಭಿಸಾರಿಕೆ

ಸಾಧನೆಯ ಹಾದಿಯಲ್ಲಿ
ಹೆಜ್ಜೆ ಗುರುತು ನಿನ್ನದೇ
ಪ್ರಶಸ್ತಿ ಇರಲಿ ಇಲ್ಲದಿರಲಿ
ನಮ್ಮ ನಮನ ನಿನಗಿದೆ .

ಸೋಮವಾರ, ಸೆಪ್ಟೆಂಬರ್ 4, 2017



 ಮರೆಯಲಾಗದ  ಈ ಪಯಣ
ಸ್ನೇಹಿತರೊಡನೆ , ನಮ್ಮ ಬದುಕಿನ ಭಾಗವಾಗಿರುವವರೊಡನೆ ಕಳೆಯುವ ಸಮಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅಂತಹ ದಿನ ಬದುಕಿನ ಪುಸ್ತಕದ ಪುಟ ಸೇರಿದ್ದು ಮೊನ್ನೆ ಶನಿವಾರದಂದು! 
ಬೆಳಗಿನ ತುಂತುರು ಮಳೆಯ ಜೊತೆ ಜೊತೆಗೆ ನಮ್ಮ ಪಯಣ ಸಾಗಿದ್ದು ಮೈಸೂರಿನ ಅಧಿದೇವತೆ ಚಾಮುಂಡಿಯ ಸನ್ನಿಧಿಗೆ .. ಸುತ್ತಲೂ ಹಸಿರು ಹೊದ್ದ ಪ್ರಶಾಂತವಾದ ವಾತಾವರಣದಲ್ಲಿ ಸಾಗುವಾಗ ಮೂಡುವ ಭಾವ ವರ್ಣಿಸಲು ಪದಗಳೇ ಇಲ್ಲ. ಚಾಮುಂಡಿ ತಾಯಿಯ ಆಶೀರ್ವಾದ ಪಡೆದು ಸಾಗಿದ್ದು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಸೋಮನಾಥಪುರಕ್ಕೆ !
ಹೊಯ್ಸಳರ ಶಿಲ್ಪಕಲೆಯನ್ನು ಶತಮಾನಗಳಿಂದ ಶತಮಾನಗಳಿಗೆ ಪರಿಚಯಿಸಲು ನಿಂತ ಮಾರ್ಗದರ್ಶಿಯಂತೆ ಕಂಗೊಳಿಸುವ ಚೆನ್ನಕೇಶವ ದೇವಾಲಯದ  ನೋಡಲು ಎರಡು ಕಣ್ಣುಗಳು ಸಾಲದು .  ಪರಕೀಯರ ದಾಳಿಗೆ ನಲುಗಿ ಹೋದ ಶಿಲೆಗಳನ್ನು ನೋಡುವಾಗ ಮನಸ್ಸಿಗೆ ಖೇದವಾಗುತ್ತದೆ. ಧಾರ್ಮಿಕ ಸ್ಥಳವಾದರೂ ದೇವರಿಲ್ಲದ ಗುಡಿಯಾಗಿ, ಪರಕೀಯರ ಅಟ್ಟಹಾಸಕ್ಕೆ ಜ್ವಲಂತ ಸಾಕ್ಷಿಯಾಗಿ ನಿಂತಿದೆ ಈ ದೇವಾಲಯ . ಆದರೂ ಶಿಲ್ಪಕಲೆಯನ್ನು ಕಣ್ಣು ತುಂಬಿಕೊಂಡು ಹೊರಗೆ ಬಂದಾಗ ಮನದ ತುಂಬಾ ಅಭಿಮಾನ!
ಮುಂದಿನ ನಮ್ಮ ಪಯಣ ಸಾಗಿದ್ದು ಮಂಡ್ಯ ಜಿಲ್ಲೆಯ ಶಿವನಸಮುದ್ರದತ್ತ!  ಕರ್ನಾಟಕದ ಜೀವನಾಡಿಯಾದ ಕಾವೇರಿ ನದಿಯು ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಕವಲುಗಳಾಗಿ ಬೀಳುವ ಪರಿಯಂತೂ ಅದ್ಭುತ! ದೂರಕ್ಕೆ ಕೇಳಿಸುತ್ತಿದ್ದ ನೀರಿನ ಭೋರ್ಗರೆತದ ಸದ್ದು ಮೊದಲಿನಂತೆ ಈ ಸಲ ಕೇಳಿಸಲಿಲ್ಲ. ಅಷ್ಟೇನೂ ವಿದ್ಯಾವಂತನಲ್ಲದ ಕಾರಿನ ಚಾಲಕ, ಮನುಷ್ಯನ ವರ್ತನೆಗಳೇ ಮಳೆಯ ಪ್ರಮಾಣ ಕಡಿಮೆಯಾಗಿ ಜಲಪಾತದ ಈ ಸ್ಥಿತಿಗೆ ಕಾರಣನಾಗಿದ್ದಾನೆ ಎಂದು ನೇರ ಆರೋಪ ಮಾಡಿದಾಗ ವಿದ್ಯಾವಂತ ಸಮಾಜ ಕಲಿಯಬೇಕಾದ್ದು ಬಹಳಷ್ಟಿದೆ ಎಂದು ಅನ್ನಿಸದೆ ಇರಲಿಲ್ಲ. 
ಪ್ರವಾಸಕ್ಕೆ ಹೋಗುವ ವಿದ್ಯಾವಂತರ ದುರ್ವರ್ತನೆಗಳಿಂದ ಪ್ರಕೃತಿಯ ಮಡಿಲಲ್ಲಿ ಆಟವಾಡುವ ಅವಕಾಶ ತಪ್ಪಿಹೋಯಿತಾದರೂ ಧುಮ್ಮಿಕ್ಕುವ ನೀರ ಹೊಗೆಯಲ್ಲಿ ಕಳೆದುಹೋದದ್ದಂತೂ ಸುಳ್ಳಲ್ಲ! ಸುಂದರ ನೆನಪುಗಳೊಂದಿಗೆ,ಮಧುರ ಅನುಭೂತಿಯೊಂದಿಗೆ ಮನೆಗೆ ಮರಳುವಾಗ ಉಳಿದಿದ್ದು ಜೊತೆಯಾಗಿ ಕಳೆದ ಆ ಒಂದು ದಿನದ ಅನುಭವ!

ಬುಧವಾರ, ಮಾರ್ಚ್ 8, 2017

ಒಂದು ಗುಲಾಬಿ ಹೂವು ......








"ಮಾಮ್, ಬೆಳಗ್ಗಿಂದ ಎಲ್ಲೋಗಿದ್ರಿ? ನಾನು ಕಾಯುತ್ತ ಇದ್ದೆ . ತಗೊಳ್ಳಿ ಇದು ನಿಮಗೆ ಅಂತ ತಂದಿದ್ದು.ನಮ್ಮ ಮನೇಲಿ ಬೆಳೆದ ಮೊದಲನೇ ಗುಲಾಬಿ ಹೂವು. ಚೆನ್ನಾಗಿ ಕಾಣುತ್ತೆ ಮುಡ್ಕೊಳ್ಳಿ. "
ಇದು ಹೇಳಿದ್ದು ಇನ್ನೇನು ಕೆಲವು ದಿನ ಮಾತ್ರ ನನ್ನ ಜೊತೆ ಇರುವ ಹತ್ತನೇ ತರಗತಿ ಹುಡುಗಿ ಆಯೇಷಾ . ವರ್ಷವಿಡೀ ಅವಳು ನನ್ನೊಂದಿಗೆ ಇದ್ದರು ಅವಳಿಗೆ ನಾನು ತುಂಬಾ ಇಷ್ಟ ಅನ್ನೋದನ್ನು ಕೊನೆಗೂ ಹೋಗೋ ಮುಂಚೆ ತಿಳಿಸಿಯೇ ಬಿಟ್ಟಳು. ಅಷ್ಟೇನೂ ಬುದ್ಧಿವಂತಳಲ್ಲದ ಅವಳು ನನ್ನ ಸೆಳೆದಿದ್ದು ತನ್ನ ಒಳ್ಳೆಯ ನಡತೆಯಿಂದ!

ನನ್ನ ಬಾಲ್ಯದ ದಿನಗಳಲ್ಲಿ ಹೂವು ಮುಡಿಯುವ ಬಗ್ಗೆ ತುಂಬಾ ಆಸೆ ಇತ್ತು. ಬೆಳೆಯುತ್ತ ಹೋದಂತೆಲ್ಲ ಅದು  ಗಿಡದಲ್ಲಿ ಇದ್ದರೇನೇ ನೋಡಲು ಚಂದ ಎಂದು ಮುಡಿಯುವುದನ್ನು ಕಡಿಮೆ ಮಾಡಿದ್ದೆ. ಬೆಂಗಳೂರಿಗೆ ಬಂದ ಮೇಲಂತೂ ಹೂವಿಗೂ ನಂಗು ಇದ್ದ ನಂಟು ಅಷ್ಟಕ್ಕಷ್ಟೇ. ಅಷ್ಟೊಂದು ದುಡ್ಡು ಕೊಟ್ಟು ಯಾರಿಗೋ ನೋಡೋಕೆ ನಾವ್ಯಾಕೆ ಮುಡ್ಕೋಬೇಕು ಅಂತ ಅನ್ನಿಸ್ತಾ ಇತ್ತು. ಹಾಗಾಗಿ ಹೂವಿನ ಜೊತೆಗಿನ ನನ್ನ ಬಾಂಧವ್ಯ ಕಡಿಮೆ ಆಗಿದೆ. 

ಆದರೆ ಇವತ್ತು ಇದನ್ನೆಲ್ಲಾ ನೆನೆಸಿಕೊಳ್ಳೋ ತರ ಮಾಡಿದ್ದು ಆ ಗುಲಾಬಿ ಹೂವು. ಪ್ರೀತಿಯಿಂದ ಕೊಟ್ಟ ಹುಡುಗಿಗೊಂದು ದೊಡ್ಡ ಧನ್ಯವಾದ! 
ಇನ್ನೊಂದು ವಿಷ್ಯ ಗೊತ್ತಾ?  ನಿನ್ನೆ ರಾತ್ರಿ ತನಕ ಮುಡ್ಕೊಂಡಿದ್ದೆ. ಬಿಸಾಕೋಕೆ ಮನಸ್ಸೇ ಆಗಿಲ್ಲ. ನೋಡೋಣ ಅಂತ ನೀರಲ್ಲಿ ಹಾಕಿ ಇಟ್ಟಿದ್ದೆ. ಬೆಳಗ್ಗೆದ್ದು ನೋಡಿದರೆ ನನ್ನನ್ನು ನೋಡಿ ನಗ್ತಾ ಇತ್ತು ಮುದ್ದು ಗುಲಾಬಿ!  ಬಿಟ್ಟು ಹೋಗೋಕೆ ಮನಸ್ಸೇ ಆಗಿಲ್ಲ. ಮುಡಕೊಂಡು   ಹೋಗಿದ್ದೆ. ಅದು ಸಾರ್ಥಕ ಅನ್ನಿಸಿದ್ದು ಯಾವಾಗ ಗೊತ್ತಾ? 
                    ಆ ಎರಡು ಮುಗ್ಧ ಕಣ್ಣುಗಳು ಅದನ್ನು ನೋಡಿ ಅರಳಿದಾಗ!


ಮಂಗಳವಾರ, ಫೆಬ್ರವರಿ 28, 2017

ಎತ್ತ ಸಾಗುತ್ತಿದೆ ಯುವ ಜನಾಂಗ ?


                      ಮೊನ್ನೆ ತಾನೇ ಹತ್ತನೇ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಮುಗಿಸಿ ಮನೆಗೆ ಬಂದ ನನಗೆ ಇಂದಿಗೂ ಕಾಡುವ ಪ್ರಶ್ನೆ ಎತ್ತ ಸಾಗುತ್ತಿದೆ ನಮ್ಮ ಮಕ್ಕಳ ಮನಸ್ಥಿತಿ ಅಂತ !
                 
                       ಮಕ್ಕಳು ದೇವರ ಸಮಾನ , ಮಕ್ಕಳು ಮುಗ್ಧರು  ಅವ್ರಿಗೆ ಏನು ಗೊತ್ತಿಲ್ಲ ಅಂತೆಲ್ಲ ನಾವು ಅಂದ್ಕೋತೀವಿ ನೋಡಿ ನಾವು ನಿಜವಾಗಲೂ ಮುಗ್ಧರು ಅವರಲ್ಲ! ಆಧುನಿಕತೆ , ಮಕ್ಕಳ ಮುಗ್ಧತೆಯನ್ನು ಕಬಳಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಹೆತ್ತವರ ದೃಷ್ಟಿಕೋನದಿಂದ ನೋಡಿದಾಗ ಎಲ್ಲ ಮಕ್ಕಳು ಒಳ್ಳೆಯವರೇ! ಆದರೆ ಕಳೆದ ೫ ವರ್ಷಗಳಿಂದ ಶಿಕ್ಷಕಿಯಾಗಿ ಮಕ್ಕಳ ಒಡನಾಟದಲ್ಲಿರುವ ನನಗೆ ಅವರನ್ನು ತುಂಬಾ ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶವೇನೋ ಸಿಕ್ಕಿತು. ಅದಕ್ಕೂ ಮುಂಚೆ ನಾನು ಕೂಡ ಮಕ್ಕಳೆಲ್ಲರೂ ಮುಗ್ಧರು ಅಂತಾನೇ ತಿಳ್ಕೊಂಡಿದ್ದೆ.

                         ಕೆಳದರ್ಜೆಯ  ಮಧ್ಯಮ ವರ್ಗದ ಮಕ್ಕಳು ಇರುವ ಶಾಲೆಯಲ್ಲಿ ಕೆಲಸ ಮಾಡೋದರಿಂದ ಆ ಮಕ್ಕಳೆಲ್ಲ ಮುಗ್ಧರಾಗಿರುತ್ತಾರೆ ಹಾಗು ಶಿಕ್ಷಕರಿಗೆ ಸ್ವಲ್ಪ ಗೌರವ ಕೊಡಬಹುದು ಅನ್ನೋ ತಪ್ಪು ಕಲ್ಪನೆ ನನ್ನಲ್ಲಿತ್ತು. ಆದರೆ ಇಂದಿನ ಮಕ್ಕಳಿಗೆ ಹಲವಾರು ಅವಕಾಶಗಳು ಇರೋದರಿಂದ ಜ್ಞಾನವನ್ನು ಶಿಕ್ಷಕರ ಸಹಾಯವಿಲ್ಲದೆ ಪಡೆದುಕೊಳ್ಳಬಹುದು ಅನ್ನೋ ಮನೋಭಾವ! ಸಿಗುವ ಅವಕಾಶಗಳನ್ನು   ಬಳಸಿಕೊಂಡು ಜೀವನದಲ್ಲಿ ಮುಂದೆ ಬಂದರೆ ಸಂತೋಷಾನೇ ... ಆದರೆ ನಿಜವಾಗಲೂ ಅದು ಆಗುತ್ತಾ?
                          ಒಳ್ಳೆ ವಿದ್ಯಾಭ್ಯಾಸ ಕೊಡಬೇಕು ಅಂತ ಹಗಲು ರಾತ್ರಿ ಕಷ್ಟ ಪಟ್ಟು ದುಡಿಯುವ ಹೆತ್ತವರ ಬಗ್ಗೆನೇ ಗೌರವ ಇಲ್ಲ. ಇನ್ನು ಶಿಕ್ಷಕರು ಏನು ನಿರೀಕ್ಷಿಸಲು ಸಾಧ್ಯ? ಹದಿಹರೆಯದ  ವಯಸ್ಸೇ ಹಾಗೆ! ಯಾವುದರ ಕಡೆಗೆ ನಮ್ಮ ಗುರಿ ಇರಬೇಕೋ ಅದು ತೀರಾ ಕ್ಷುಲ್ಲಕವಾಗಿ ಕಾಣುತ್ತದೆ. ಯಾವುದು ನಮ್ಮ ಜೀವನವನ್ನು ಹಾಳು ಮಾಡುತ್ತದೋ ಅದೆಲ್ಲ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಮಕ್ಕಳಿಗೋಸ್ಕರ ದುಡ್ಡು ಮಾತ್ರ ಹೊಂದಿಸಿಕೊಡಬೇಕು ಅನ್ನೋ ಧಾವಂತ ಮಾತ್ರ ಈ ಹೆತ್ತವರಲ್ಲಿ ನಮಗೆ ಕಾಣುತ್ತೆ. ನಮ್ಮ ಮಕ್ಕಳಲ್ಲಿ ಒಳ್ಳೆ ಮೌಲ್ಯಗಳನ್ನು ಬಿತ್ತುವುದು ದುಡ್ಡಿಗಿಂತ ತುಂಬಾ ದೊಡ್ಡ ಕೆಲಸ ಅಂತ ಯಾರು ತಿಳ್ಕೊಳ್ಳೋದೇ ಇಲ್ಲ. ಅದಕ್ಕೆ ಈ ಮಕ್ಕಳು  ಚಿಕ್ಕ ವಯಸ್ಸಿನಲ್ಲೇ ಅಡ್ಡ  ದಾರಿ ತುಳಿಯುತ್ತಾರೆ. ಶಾಲಾ ಸಮಯದಲ್ಲಿ ಎಶ್ಟು ಒಳ್ಳೆಯ ಮೌಲ್ಯಗಳನ್ನು ಬಿತ್ತಿದರು ಕೂಡ ಅವರು ವಾಸಿಸುವ ಪರಿಸರ, ಅವರ ಸ್ನೇಹಿತರು ಸರಿ ಇಲ್ಲದಿದ್ದರೆ ನಾವು ಮಾಡುವ ಪ್ರಯತ್ನ ಎಲ್ಲವು ನೀರಿನ ಮೇಲೆ ಹೋಮ ಮಾಡಿದ ಹಾಗೆ.

                           ಇಂದಿನ ಕಾನೂನು , ಶಿಕ್ಷಣ ಪದ್ಧತಿ ಎಷ್ಟು ಮಕ್ಕಳಿಗೆ ಅನುಕೂಲ ಮಾಡಿ ಕೊಡುತ್ತದೋ ಅಷ್ಟು ಮಕ್ಕಳು ಅದರ ದುರ್ಬಳಕೆ ಮಾಡುತ್ತಾರೆ ಅನ್ನೋದು ಅಷ್ಟೇ ಸತ್ಯ ! ಯಾರು ಏನೇ ಹೇಳಿದರು ನಮ್ಮ ಬಾಲ್ಯಾನೇ ಚೆನ್ನಾಗಿತ್ತು ಅಲ್ವ?   ಶಿಕ್ಷೆ ಇಲ್ಲದ ಶಿಕ್ಷಣ ಇಲ್ಲ ಅಂತ ಹೇಳ್ತಾರೆ. ಅಲ್ಲಿ ಶಿಕ್ಷೆನು ಇತ್ತು ಶಿಕ್ಷಣಾನು ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ  ಮೌಲ್ಯಗಳು ಕೂಡ ಇತ್ತು.
  ಪಡೆಯುವ ಶಿಕ್ಷಣ ಕಡಿಮೆ ಇದ್ದರೂ ಜ್ಞಾನ ತುಂಬಾ ಹೆಚ್ಚು ಇರುತ್ತಿತ್ತು. ಜ್ಞಾನ ಸಂಪಾದನೆಗೆ ದಾರಿ ಗುರುಗಳ ಮೂಲಕ ಮಾತ್ರವಿತ್ತು. ಮುಂದೆ ಗುರಿ ಹಿಂದೆ ಗುರು ಎಂಬ ಮಾತು ತುಂಬಾ ಅನ್ವಯವಾಗ್ತಾ ಇತ್ತು. ಅದಕ್ಕೆ ಇಂದಿಗೂ ನಂಗೆ ಕಲಿಸಿದ ಗುರುಗಳ ಬಗ್ಗೆ ನಂಗೆ ತುಂಬಾ ಅಭಿಮಾನ ,ಗೌರವ !

                              ಪ್ರತಿ ವರ್ಷ ಒಂದು ಮಗುವನ್ನಾದರೂ ಒಳ್ಳೆ ವ್ಯಕ್ತಿಯಾಗಿ ಸಮಾಜಕ್ಕೆ ಕೊಡಬೇಕು ಅನ್ನೋದಷ್ಟೇ ಸದ್ಯಕ್ಕಿರುವ ನನ್ನ ಗುರಿ. ಆ ನಿಟ್ಟಿನಲ್ಲಿ ದಿನಾ ನೀತಿ ಪಾಠ ಮಾಡ್ತೀನಿ. ತಗೊಳ್ಳೋದು ಬಿಡೋದು ಅವರಿಗೆ ಸೇರಿದ್ದು.