ಗುರುವಾರ, ಜುಲೈ 7, 2016

ಹಸಿರ ಹೊದ್ದ ಹರೆಯಕಿಂದು ಅಭ್ಯಂಜನ ...
 ತಂಪು ಗಾಳಿ ಹೊತ್ತು ತಂತು ನಗುವಿನಾಭರಣ ...
ಹನಿ  ಹನಿಗಳ ಪೋಣಿಸಿ .. ಹಸಿರ ನಡುವೆ ಸೇರಿಸಿ
ಭೂಮಿ ತಾಯ ತನುವನ್ನೆಲ್ಲ
ಬಿಟ್ಟು ಬಿಡದೆ ಸಿಂಗರಿಸಿ !
ಭಾವಗಳಿಗೆ ಸಿಂಚನ ಬಾನು ಭುವಿಯ ಸಮ್ಮಿಲನ !

ಹಾರುವ  ಹಕ್ಕಿಗಳ ರೆಕ್ಕೆಗಳಲಿ
ಹಸಿರ ಎಲೆಗಳ ಚಿಗುರಿನಲ್ಲಿ
ಹರಿವ ನೀರ ಸದ್ದಿನಲ್ಲಿ
ಏನೋ ಒಂದು ಹೊಸತನ
ಆಹಾ ಎಂಥ ರೋಮಾಂಚನ !

ಓಡುತಿರುವ ಮೋಡಗಳಿಗೂ
ಕಂಪ ಸೂಸೋ ಹೂವುಗಳಿಗೂ
ಹಪಹಪಿಸುವ ಹೃದಯಗಳಿಗೂ
ಸಿಗುವುದೀಗ ಭರವಸೆ
 ಇಳೆಯ ಪ್ರೀತಿ ಮುಂದೆ ಸೋಲೋ
ಬಾನು ನೀಡೋ ಭರವಸೆ !

ಮಳೆ ಹನಿಯ ಪಿಸು ಮಾತು
ಕಣ್ಣ ಭಾಷೆಯ ಕವನ
ಅರ್ಥವಾಗದ ಜಗದ ನಿಯಮ !

ಭಾರವಾಗುವ ಹೆಜ್ಜೆ
ಮೂಕವಾಗುವ ಮನಸು
ಸೋತು  ಸೊರಗುವ ಹೃದಯ !

ಮಧುವ ಹೀರಲು ಬಂದ
ಭ್ರಮರಕದು ಚಂದ
ಕೇಳುವುದೆ ಹೂವ ಸಮ್ಮತಿ?

ಪ್ರೀತಿಯಿಲ್ಲದ ಮೇಲೆ
ಕಳುಹುವರು ಯಾರು
 ಭಾವಗಳ ಓಲೆ?
                                          -ಸ್ಮಿತಾ

ಗುರುವಾರ, ಫೆಬ್ರವರಿ 18, 2016

ಭಾವಯಾನಕೆ ಭಾವಗಳ ಮೊಗೆ ಮೊಗೆದು ಕೊಟ್ಟವನು 
ಹೃದಯ  ಶಿಖರದ ಮೇಲೆ ನನ್ಹೆಸರು ಬರೆದವನು 
ಪ್ರೀತಿಯ ಜೇನನ್ನು ಮಾತಲ್ಲೇ ಉಣಿಸಿದನು
ನನ್ನ ಪ್ರೀತಿ ಗೀತೆಯ ರಾಗ ಅವನಾಗಿ ಕಾಡಿಹನು
ಪ್ರೀತಿ ಪುಟದಲಿ ಹಸ್ತಾಕ್ಷರವ ಹಾಕಿದನು
ನನ್ನೊಲುಮೆ ಮಾತಿಗೆ ಪ್ರತಿಘಳಿಗೆ ಕಾಯುವನು
ಜನ್ಮ ಜನ್ಮಾಂತರದಾ ಗೆಳೆಯನು
ನನ್ನ ಮುದ್ದು ಹುಡುಗನು !

ಭಾನುವಾರ, ಫೆಬ್ರವರಿ 14, 2016

ಮುದ್ದು ಗೆಳೆಯಾ...
                          ನಿನ್ನ ಆತ್ಮೀಯವಾಗಿ ಕರೆಯಲು ನನ್ನಲ್ಲಿ ಪದಗಳೇ ಇಲ್ಲ ಕಣೊ.. ಏನು ಕರೆದರೂ ಕಮ್ಮಿ ಅನ್ನಿಸುತ್ತದೆ. ಇಂದು ಜಗತ್ತೆಲ್ಲ ಆಚರಿಸುವ ಪ್ರೇಮಿಗಳ ದಿನ. ಆದರೆ ನನಗೆ ಅಂಥ ವಿಶೇಷವೇನೂ ಅನ್ನಿಸುತ್ತಿಲ್ಲ. ಕಾರಣ ಪ್ರತಿದಿನ ಪ್ರತಿಘಳಿಗೆ ನನ್ನ ಪ್ರತಿ ಉಸಿರಲೂ ನಿನ್ನನ್ನೇ ಉಸಿರಾಡುವಾಗ ಈ ಒಂದು ದಿನದ ಅಗತ್ಯ ಮಹತ್ವವಾದದ್ದು ಅನ್ನಿಸುತ್ತಿಲ್ಲ.
                           ನಿನ್ನ ಮಾತು ತುಂಬಾ ಚಂದ ... ಕೇಳ್ತಾನೆ ಇರೋಣ ಅನ್ಸೋ ಅಷ್ಟು! ಆದರೆ ಶಬ್ದವೇ ಕೇಳಿಸದಷ್ಟು ದೂರದಲ್ಲಿ ಇದ್ದೀಯ ನೀನು!
                            ನೀ ಎದುರು ನಿಂತಾಗ ನನ್ನ ನಾನೇ ಮರೆಯೋ ಅಷ್ಟು ಮುದ್ದು ಮುದ್ದು! ಆದರೆ ಬರೇ ಕನಸಲ್ಲಿ ಮಾತ್ರ ನಿನ್ನ ಆಗಮನ ! ನಿನ್ನ ಆ ಮಾಂತ್ರಿಕ ಸ್ಪರ್ಶ ...ನಿನ್ನಲ್ಲಿ  ನಾ ಕಳೆದು ಹೋಗುವಷ್ಟು!
                             ಮಾರ್ದವತೆ ತುಂಬಿದ ಆ ಮಾತು, ಆರ್ದ್ರವಾದ ಹೃದಯದಲ್ಲಿ ನೆಲೆ ನಿಂತು  ವಸಂತಗಳು ಕಳೆದು ಹೋದರೂ ಇನ್ನು ಹಚ್ಚ ಹಸಿರು!
                             ಈ ಹಳಿಗಳ ತರಹ ನಾವಿಬ್ಬರೂ ಹತ್ತಿರ ಇದ್ದರೂ ಸೇರಲಾರದಷ್ಟು ದೂರ ದೂರ !
ಕಣ್ಣು ಹಾಯಿಸಿದಷ್ಟು ದೂರ ಬರೇ ಕತ್ತಲು ! ಮನವ ಬೆಳಗುವ ರವಿ ಹುಟ್ಟೊದೇ ಇಲ್ಲ ನನ್ನ ಬಾಳಲ್ಲಿ ಎನ್ನುವ ಭಾವ! ಬಿರು ಬೇಸಗೆಯಿಂದ   ಬೇಸತ್ತ ಭೂಮಿ ವರುಣ ಕೃಪೆಗಾಗಿ ಕಾಯುವಂತೆ ನನ್ನ ಮನ ನಿನಗಾಗಿ ಕಾಯುತಿದೆ !
                         ಎಲ್ಲ ಪ್ರೇಮಿಗಳಂತೆ ಜೊತೆಯಾಗಿ ಪಾರ್ಕ್ ನಲ್ಲಿ ಅಲೆದಾಡಿಲ್ಲ , ಒಂದೆ ಒಂದು ಸಿನೆಮಾ ನೋಡಿಲ್ಲ,  ಭೇಟಿಯಾಗಿಲ್ಲ! ಆದರೂ ಮನಸ್ಸಿಗೆ ತುಂಬ ಆತ್ಮೀಯನಾಗಿ ನಿಂತವನು ನೀನು .. ಸ್ನೇಹ ಮತ್ತು ಪ್ರೀತಿಯ ನಡುವಿನ ಎಳೆಯನ್ನು ಬಿಡಿ ಬಿಡಿಯಾಗಿ ಬಿಡಿಸಿಟ್ಟು ಭಾವನೆಗಳಲ್ಲಿ ಬಂಧಿಸಿದವನು ನೀನು... ಹೃದಯದ ಸುತ್ತ ಭದ್ರವಾದ ಬೇಲಿಯಲ್ಲಿ ನಿನ್ನ ಬಂಧಿಸಿಡುವ ಬಯಕೆ ನನಗೆ.. ಆದರೆ???  ಎಂದೂ ಒಂದಾಗದ ಹಳಿಗಳಂತಹ ಬದುಕು ನಮ್ಮದು!!!!!
                            ಕಲ್ಪನೆಗಳು ಹೀಗೂ ಉಂಟೆ ?????

ಸೋಮವಾರ, ಜನವರಿ 25, 2016

ಲೇಖನ

ಎಂಥ ಪ್ರಶ್ನೆ ಎಲ್ಲಿದೆ ಉತ್ತರ?

Yardley London- ಎಲ್ಲಾದರೂ ಕೇಳಿದ್ದೀರಾ? ಹೌದು ಅದೇ ಸೋಪ್ ! ನನ್ನ ಮಗಳಿಗೆ ಅದರಲ್ಲೇನೋ ಮೋಹ. ನಿನ್ನೆ ಭಾನುವಾರ ಆರಾಮವಾಗಿ ಬೆಳಗ್ಗಿನ ಕೆಲಸ ಮುಗಿಸಿ ಸ್ನಾನ ಮಾಡಿ ಬಾ ಎಂದಾಗ ನಂಗೆ Yardley soap ಕೊಡು ಅಂದಳು. ಅವಳಿಗೆ ಪ್ರಧ್ಹನ ಮಂತ್ರಿ ಮೋದಿ ಅಂದ್ರೆ ಅದೇನೋ ಇಷ್ಟ . ಸ್ವಚ್ಚ್ ಭಾರತ ಅಭಿಯಾನ ಪ್ರಾರಂಭವಾದಾಗ ಸಾರಕ್ಕಿ ಮಾರ್ಕೆಟ್ ಬಳಿ ಗಲೀಜು ನೋಡಿ ಮೋದಿ ಹೇಳಿದ್ರು ಯಾರು ಕೇಳೋದೇ ಇಲ್ಲ ಅಂತ ಹೇಳೋವಾಗಲೇ ನಂಗೆ ಅವಳ ಅಭಿಮಾನದ ಬಗ್ಗೆ ಗೊತ್ತಾಗಿದ್ದು. ಅದನ್ನೇ ಇಲ್ಲಿ ಪ್ರಯೋಗ ಮಾಡೋಣ ಅಂತ "ಮೋದಿ ನೋಡಿದ್ರೆ Make In India ಅಂತಾರೆ . ನೀನು ಮಾತ್ರ ವಿದೇಶಿ ಸೋಪ್ ಬೇಕು ಅಂತಿಯಲ್ಲ" ಅಂತ ಕೇಳಿದೆ. ಅವಳು ಕೇಳಿದ ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇರಲಿಲ್ಲ. ಅಂಥ ಪ್ರಶ್ನೆ ಏನಿರಬಹುದು ಅಂದುಕೊಂಡ್ರಾ? "ಹಾಗಾದರೆ ವಿದೇಶಿ ವಸ್ತುಗಳು ನಮ್ಮಲ್ಲಿ ಯಾಕೆ ಸಿಗುತ್ತವೆ? ಅದಕ್ಕೆ ತಾನೇ ನಾವು ಉಪಯೋಗಿಸೋದು" ಏನು ಹೇಳಬೇಕೋ  ಸ್ಥಿತಿ ನನ್ನದಾಗಿತ್ತು.
     ಎಷ್ಟು ನಿಜ ಆಲ್ವಾ? ೧೦ ವರ್ಷದ ಮಗುವಿನ ಮನದಲ್ಲಿ ಮೂಡಿದ ಪ್ರಶ್ನೆ ದೊಡ್ಡವರಾದ ನಮಗೆ ಯಾಕೆ ಹೊಳೇಲಿಲ್ಲ? ಒಂದು ಕಾಲದಲ್ಲಿ ಅತಿವೇಗದ ಆರ್ಥಿಕ ಬೆಳವಣಿಗೆ ಎಂಬ ಕಲ್ಪನೆಯಲ್ಲಿ ಸುಮಾರು ರಾಷ್ಟ್ರಗಳು GATT ಗೆ ಸಹಿ ಹಾಕುವಾಗ , ಜಾಗತೀಕರಣದ ಕಪಿ ಮುಷ್ಟಿಯಲ್ಲಿ ನಮಗರಿಯದೆ ನಾವು ಬಂಧಿತರಾದಾಗ ,ಪಾಶ್ಚಿಮಾತ್ಯ ಸಂಸ್ಕೃತಿಯ ನೆರಳಲ್ಲಿ ಆಶ್ರಯ ಪಡೆಯಲು ಹೊರಟಾಗ ನಮಗೆ ಇದೆಲ್ಲದರ ಪರಿವೆ ಇದ್ದಿದ್ದರೆ? ಮುಕ್ತ ಮಾರುಕಟ್ಟೆ ಎಂಬ ಜಾಲದಲ್ಲಿ ಎಷ್ಟೊಂದು ರಾಷ್ಟ್ರಗಳು ತಮ್ಮತನವನ್ನು ಕಳೆದುಕೊಂಡಾಗಿದೆ. ಏನಿದ್ದರೂ ವಿದೇಶಿ ವಸ್ತುಗಳ ಅಂದ ಮಾತ್ರ ಕಣ್ಣಿಗೆ ಚಂದ. ನೀವು ಉಪಯೋಗಿಸಲ್ವಾ ಹಾಗಾದ್ರೆ ಅಂತ ಕೇಳಬಹುದು ನೀವು!  ನನ್ನನ್ನೂ ಸೇರಿಸಿ ಎಲ್ಲರಿಗೂ ಅನ್ವಯ ಇದು. ಇಲ್ಲವಾದಲ್ಲಿ ನಮ್ಮ ಮನೆಯಲ್ಲಿ ಇದರ ಬಗ್ಗೆ ಮಾತು ಬರುತ್ತಿರಲಿಲ್ಲ.
      ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೇ ಪೂಜನೀಯ ಬಾಪೂಜಿಯವರು ವಿದೇಶಿ ವಸ್ತುಗಳ ಉಪಯೋಗ ಮಾಡದಿರಲು ಹಾಗು ಸ್ವದೇಶಿ ವಸ್ತುಗಳ ಬಳಕೆ ಮಾಡಲು ಕರೆ ಕೊಟ್ಟು ಖಾದಿ ನೇಯ್ಗೆ ಯನ್ನು ತಾವೇ ತಯಾರಿಸಲು ಪ್ರಾರಂಭಿಸಿ ಈ Make in India ಗೆ ಚಾಲನೆ ನೀಡಿದ್ದರು ಆಲ್ವಾ? ಆದರೆ ಸ್ವಾತಂತ್ರ್ಯ ಪಡೆದ ಸಂಭ್ರಮದಲ್ಲಿ ಆ ಖುಷಿಯಲ್ಲಿ, ನಂತರ ನಡೆದ ರಾಜಕೀಯದಲ್ಲಿ ಭಾರತೀಯರೆಲ್ಲ ಮುಳುಗಿ ಮತ್ತೆ ಹೊರಗೆ ಬಂದಿದ್ದು ಜಾಗತೀಕರಣವೆಂಬ ಹೊಸ ರೂಪದೊಂದಿಗೆ.!
       ಮುಕ್ತ ಮಾರುಕಟ್ಟೆಯಲ್ಲಿ ನಮ್ಮನ್ನೇ ನಾವು ಕಳೆದುಕೊಳ್ಳುತ್ತಿರುವಾಗ ಈ cocept ಎಷ್ಟು ಫಲಕೊಡಬಲ್ಲದು? ಗೊತ್ತಿಲ್ಲ.  ನಮಗೇ ಬೇಡವಾಗಿದ್ದನ್ನು  ಪೀಳಿಗೆ ಒಪ್ಪಿಕ್ಕೊಳ್ಳುವುದೇ ಕಾಡು ನೋಡಬೇಕು. ಇಲ್ಲವೆಂದಾದಲ್ಲಿ ನನ್ನ ಮಗಳು ಕೇಳಿದ ಪ್ರಶ್ನೆಯನ್ನೇ ಎಲ್ಲ ಮಕ್ಕಳು ಕೇಳಬಹುದೇನೋ ! ಕಾಲಾಯ ತಸ್ಮೈ ನಮಃ !!!
     

ಸೋಮವಾರ, ಜನವರಿ 11, 2016

ಮನಸ್ಸೇ Relax please!

ಮನಸ್ಸೇ Relax please!

 ಹುಟ್ಟು ಸಾವಿನ ನಡುವೆ ನಾಲ್ಕು ದಿನದ  ಬದುಕು ....  ಖುಷಿಯ ಕ್ಷಣಗಳು, ಬದುಕು ಎಷ್ಟು ಬೇಗ ಮುಗಿಯುತ್ತಲ್ಲ ಅನ್ನೋ ಭಾವವನ್ನು ಕೊಟ್ಟರೆ, ದುಃಖ ಇಡುವ ಪ್ರತಿ ಹೆಜ್ಜೆಯಲ್ಲೂ  ನಡೆದಷ್ಟು ಮುಗಿಯದ ಹಾದಿಯನ್ನು ತೋರಿಸುತ್ತದೆ. ಬದುಕಲ್ಲಿ ಬರುವ ಅದೆಷ್ಟೋ ಬಂಧಗಳು ಸಂಬಂಧವಾಗಿ, ಬಂಧನವಾಗಿ ಇತಿಹಾಸದ ಪುಟ ಸೇರುತ್ತಲೇ ಇರುತ್ತದೆ.  ದೂರದಿಂದ ಚಂದವಾಗಿ ಕಾಣುವ ಅದೆಷ್ಟೋ ಮನಸುಗಳು ತೀರ ಹತ್ತಿರವಾಗಿ ಮನದಾಳದಲ್ಲಿ ಮನೆ ಮಾಡಿ, ಹೃದಯದಾಳದಲ್ಲಿ ನೆಲೆಯಾಗಿ,  ಮುಂದೊಂದು ದಿನ  ಕಟ್ಟಿದ ಗೂಡನ್ನು ಬಿಟ್ಟು  ಮತ್ತೊಂದು ಮನದಲ್ಲಿ ಮನೆ ಕಟ್ಟಲು ನಿರ್ಧಾರ ಮಾಡುತ್ತಾರೆಂದು ಅರಿವಾದ ಆ ದಿನ ! ಬದುಕೇ ಬೇಡವೆಂದು ಈ ಮನ ನಿರ್ಧರಿಸುವ ಆ ದಿನ!
ಕಾಣದ ಕಡಲಿಗೆ ಹಂಬಲಿಸುವ ಮನಸ್ಸೇ ... ಬಲವಂತವಾಗಿ ಆಗಸದಲ್ಲಿರುವ ಚಂದ್ರನನ್ನು  ಎದೆಯಲ್ಲಿ ಬಚ್ಚಿಡಲು ಸಾಧ್ಯವೇ ಎಂಬುದನ್ನು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ನೀನು? ಪ್ರೀತಿ ತಾನಾಗೆ ಹುಟ್ಟುತ್ತದೆ ಆದರೆ ಮಾನವನ ಸ್ವಾರ್ಥ , ಅಹಂ, ಅಹಂಕಾರದಿಂದ ನಾವುಗಳೇ ಅದನ್ನು ಸಾಯಿಸುತ್ತಿದ್ದೇವೆ ಎಂದು ನಿನಗನಿಸುತ್ತಿಲ್ಲವೇ .... ಬೇಕೆಂದಾಗ ಎಲ್ಲ ಬೇಕು ! ಬೇಡವೆಂದು ಬಿಸಾಕಲು ಅದೇನು ವಸ್ತುವೇ ಎಂದು ಯಾಕೆ ನೀ ಕೇಳುತ್ತಿಲ್ಲ? ನಿನ್ನಿಂದಾಗದ ಕೆಲಸ ಅದು. ಮತ್ತೆ ಪ್ರೀತಿಗೆ ನಿನ್ನ ಶರಣಾಗತಿ! ಮನಸ್ಸೇ ರಿಲಾಕ್ಸ್ ಪ್ಲೀಸ್ !

ಎಲ್ಲ ಅರಿತಾಗ


ಯಾಕೆ ಈ ಮನದ ತುಂಬಾ ಮಬ್ಬುಗತ್ತಲು?
ಯಾರೋ ಮನದ ಭಾವಪರದೆಗೆ ಬೆಂಕಿಯಿಟ್ಟವರು ?
ಬಣ್ಣ ಬಣ್ಣದ ಕನಸ ನಡುವೆ ಸತ್ಯ ಬೆತ್ತಲು !
ಅರ್ಥವಾಗೋ ವೇಳೆಗೆ ಬಾಳ ಸಂಜೆಗತ್ತಲು !

ನೀನೊಂದು ಪುಟ್ಟ ಬಿಂಬ


 ಮನದ ಆಗಸದಲ್ಲಿ ಚಂದ್ರಬಿಂಬ 
ಮುಚ್ಚಿಟ್ಟ ಕಣ್ಣ ರೆಪ್ಪೆಯಲಿ  ನಿನ್ನ  ಪ್ರತಿಬಿಂಬ 
ನನ್ನ ನಿಟ್ಟುಸಿರ ಸದ್ದಲ್ಲಿ ನಿನ್ನ ನಗೆಬಿಂಬ 
ನನ್ನೆದೆಯ   ಗರ್ಭಗುಡಿಯಲ್ಲಿ ನಿನ್ನ ಪ್ರೇಮಬಿಂಬ !