ಗುರುವಾರ, ಜುಲೈ 7, 2016

ಹಸಿರ ಹೊದ್ದ ಹರೆಯಕಿಂದು ಅಭ್ಯಂಜನ ...
 ತಂಪು ಗಾಳಿ ಹೊತ್ತು ತಂತು ನಗುವಿನಾಭರಣ ...
ಹನಿ  ಹನಿಗಳ ಪೋಣಿಸಿ .. ಹಸಿರ ನಡುವೆ ಸೇರಿಸಿ
ಭೂಮಿ ತಾಯ ತನುವನ್ನೆಲ್ಲ
ಬಿಟ್ಟು ಬಿಡದೆ ಸಿಂಗರಿಸಿ !
ಭಾವಗಳಿಗೆ ಸಿಂಚನ ಬಾನು ಭುವಿಯ ಸಮ್ಮಿಲನ !

ಹಾರುವ  ಹಕ್ಕಿಗಳ ರೆಕ್ಕೆಗಳಲಿ
ಹಸಿರ ಎಲೆಗಳ ಚಿಗುರಿನಲ್ಲಿ
ಹರಿವ ನೀರ ಸದ್ದಿನಲ್ಲಿ
ಏನೋ ಒಂದು ಹೊಸತನ
ಆಹಾ ಎಂಥ ರೋಮಾಂಚನ !

ಓಡುತಿರುವ ಮೋಡಗಳಿಗೂ
ಕಂಪ ಸೂಸೋ ಹೂವುಗಳಿಗೂ
ಹಪಹಪಿಸುವ ಹೃದಯಗಳಿಗೂ
ಸಿಗುವುದೀಗ ಭರವಸೆ
 ಇಳೆಯ ಪ್ರೀತಿ ಮುಂದೆ ಸೋಲೋ
ಬಾನು ನೀಡೋ ಭರವಸೆ !

ಮಳೆ ಹನಿಯ ಪಿಸು ಮಾತು
ಕಣ್ಣ ಭಾಷೆಯ ಕವನ
ಅರ್ಥವಾಗದ ಜಗದ ನಿಯಮ !

ಭಾರವಾಗುವ ಹೆಜ್ಜೆ
ಮೂಕವಾಗುವ ಮನಸು
ಸೋತು  ಸೊರಗುವ ಹೃದಯ !

ಮಧುವ ಹೀರಲು ಬಂದ
ಭ್ರಮರಕದು ಚಂದ
ಕೇಳುವುದೆ ಹೂವ ಸಮ್ಮತಿ?

ಪ್ರೀತಿಯಿಲ್ಲದ ಮೇಲೆ
ಕಳುಹುವರು ಯಾರು
 ಭಾವಗಳ ಓಲೆ?
                                          -ಸ್ಮಿತಾ