ಬುಧವಾರ, ಡಿಸೆಂಬರ್ 9, 2015

ಸುದ್ದಿ ಮಾಧ್ಯಮಗಳೇ ನೀವ್ಯಾಕೆ ಹೀಗೆ?

ಪ್ರಿಯ ಸುದ್ದಿ ಮಿತ್ರರೆ...
              ಒಂದಾನೊಂದು ಕಾಲದಲ್ಲಿ ಪತ್ರಿಕೋದ್ಯಮ ಕ್ಷೇತ್ರ ನನ್ನ ಆಯ್ಕೆ ಪಟ್ಟಿಗಳಲ್ಲಿ ಒಂದಾಗಿತ್ತು . ಒಳ್ಳೆ ಬರವಣಿಗೆಗಳು ಯಾರನ್ನಾದರೂ ಬದಲಿಸಬಲ್ಲದು ಎಂಬುವುರಲ್ಲಿ ಅಪಾರವಾದ ನಂಬಿಕೆಯನ್ನು ಇಟ್ಟಿದ್ದೆ. ಆದರೆ ಇವತ್ತಿನ ಸುದ್ದಿ ಮಾಧ್ಯಮಗಳನ್ನು ನೋಡಿದಾಗ ನನ್ನ ಆಯ್ಕೆ ಅದಾಗಿದ್ದಲ್ಲಿ ನಾ  ಎಷ್ಟು ಪಶ್ಚಾತ್ತಾಪ ಪಡುತ್ತಿದ್ದೆನೇನೋ ಅನಿಸುತ್ತಿದೆ.
               ನಿಮಗೆ ಯಾರಿಂದಲಾದರೂ ನೋವಾದಾಗ ಮಾತ್ರ ನೀವು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ನಿಮಗೆ ನೆನಪಾಗುವುದೇ? ನಿಮ್ಮ ಪ್ರತಿ ಹೆಜ್ಜೆಯಲ್ಲೂ ಅದರ ಛಾಯೆ ಇದ್ದಾಗ ಮಾತ್ರ ಈ ಅಂಗ ಯಶಸ್ವಿಯಾಗುತ್ತೆ , ಜನರ ಹಿತಾಸಕ್ತಿಯನ್ನು ಕಾಪಾಡುತ್ತದೆ ಎಂದು ನಿಮಗ್ಯಾಕೆ ಅರ್ಥವಾಗುತ್ತಿಲ್ಲ?
                ಯಾರದೋ ಸಂಸಾರದಲ್ಲಿ ಬಹಿರಂಗವಾಗಿ ಇಣುಕಿನೋಡುವುದು ... ಸಂಸಾರದ ಎರಡು ಗಾಲಿಗಳನ್ನು ಎರಡು ಚಾನೆಲ್ ಗಳು ಎಳೆಯುವಾಗ ನಿಮ್ಮ ಮನೆಗಳಲ್ಲಿ ಅಕ್ಕ ತಂಗಿಯರಿರುವುದು ಮರೆತು ಹೋಗುತ್ತದೆಯೇ? ಅವರೇ ಬಂದಾಗ ನಮಗೆ ತೊರಿಸುವುದಕ್ಕೇನು ಎಂಬುದು ನಿಮ್ಮ ಪ್ರಶ್ನೆಯಾಗಿದ್ದಲ್ಲಿ ಸರಕಾರದ ನಾಲ್ಕನೆ ಅಂಗ ಹೇಗಾಗುತ್ತೀರಿ?
                  ಯಾವುದೋ ಅತ್ಯಾಚಾರವನ್ನು, ಇನ್ಯಾರದ್ದೋ ಮನೆ ವಿಷಯಗಳನ್ನು, ಮತ್ಯಾರದ್ದೋ ಕಾಮಕಾಂಡವನ್ನು ಇಡೀ ದಿನ ತೋರಿಸುವುದರಿಂದ ನಿಮ್ಮ ಮನೆಯ ಎಳೆ ಮನಸ್ಸುಗಳು ನಾಳೆ ಸಮಾಜ ದ್ರೋಹಿಗಳಾಗಬಹುದು ಎಂಬ ಕಲ್ಪನೆಯಾದರೂ ನಿಮಗೇಕಿಲ್ಲ? ಕೇವಲ T R P  (ಅದೇನು ಸುಡುಗಾಡೊ ನನಗೊತ್ತಿಲ್ಲ ) ಗಾಗಿ ನೀವು ಕೆಲಸ ಮಾಡುತ್ತಿದ್ದರೆ ಸುದ್ದಿ ಮಾಧ್ಯಮ ಯಾಕೆ ಬೇಕು? ಯಾವುದೋ ಎಂಟರ್ಟೈನ್ಮೆಂಟ್ ಚಾನೆಲ್ ಸಾಕಿತ್ತು ಅಲ್ವ?
                   ಸಮಾಜದಲ್ಲಿ ಚಿಂತನೆಗೆ ಹಚ್ಚುವ ಅದೆಷ್ಟೋ ವಿಷಯಗಳು ಇರುವಾಗ ಅದ್ಯಾಕೆ ನಿಮ್ಮ ಕ್ಯಾಮೆರಾ ಕಣ್ಣುಗಳಿಗೆ ಅದೆಲ್ಲ ಕಾಣಿಸುತ್ತಿಲ್ಲ? ಅಥವಾ ನೀವು ಕಣ್ಣಿದ್ದು ಕುರುಡರೊ ನಾನರಿಯೆ! ನಿಮ್ಮಲ್ಲೂ ಸುದ್ದಿಗೆ ಬರ ಬಂದಿದೆ, ಇದು  ಕೇವಲ ಉತ್ತರ ಕರ್ನಾಟಕ ದಲ್ಲಿ ಮಾತ್ರ ಅಲ್ಲ ಅನ್ನೋ ಸತ್ಯದ ಅರಿವಾಗಿದ್ದು ನೀವುಗಳು ಅದ್ಯಾವುದೋ ವಾಹಿನಿಯ ಕೆಲಸಕ್ಕೆ ಬಾರದ ವ್ಯಕ್ತಿಯನ್ನು ಇಡೀ ದಿನ ನಿಮ್ಮ ನಾಲಗೆ ತೃಷೆಗೆ ಬಳಸಿಕೊಂದಾಗ!ಅನೈತಿಕತೆಯ, ಸುಳ್ಳಿನ ಭೀಕರ ( ಚೆನ್ನೈ ನ ಜಲಪ್ರಳಯಕ್ಕಿಂತ ಭೀಕರ ಅದು ) ಪ್ರವಾಹದಲ್ಲಿ ನಿಮ್ಮ ಮಾಧ್ಯಮಗಳು ಕೊಚ್ಚಿಕೊಂಡು ಹೋಗುತ್ತಿರುವುದು ಎಂಥ ಪೆದ್ದರಿಗೂ ಅರಿವಾಗುತ್ತಿದೆ.
                   ಕೇವಲ ವ್ಯವಹಾರದ ದೃಷ್ಟಿಯಿಂದ ಈ ಸಮಾಜವನ್ನು ಹಾದಿ ತಪ್ಪಿಸುತ್ತಿದ್ದರೆ ನಾಲ್ಕನೆ ಅಂಗ ಎಂದು ನಿಮ್ಮನ್ನು ನೀವು ಯಾಕೆ ಕರೆದುಕೊಳ್ಳುತ್ತೀರಿ ?
                   ನಿಮ್ಮ ಒಳ್ಳೆ ಕೆಲಸಗಳನ್ನು ಹೇಗೆ ಜನರ ಮುಂದೆ ಇಡುತ್ತಿರೋ , ನಿಮ್ಮಿಂದಾಗಿ ಹಾಳಾಗಿರೋ ಬದುಕುಗಳನ್ನು ಕೂಡ ಒಮ್ಮೆ ನೀವೆ ಕುಳಿತು ನೊಡಿ! ನಮಗೆ ತೋರಿಸಬೇಡಿ . ಅದರಿಂದ ಏನಾದರು ಪಶ್ಚಾತ್ತಾಪ ಆದಲ್ಲಿ ಇನ್ನು ಮುಂದೆ (ಅ) ವ್ಯವಹಾರದ ಹೆಸರಲ್ಲಿ ಜನರನ್ನು ಮೋಸ ಮಾಡುವ ಪ್ರಯತ್ನ ಮಾಡಬೇಡಿ..
                   ನನ್ನಂತೆ ಕನಸುಗಳ ಗೋಪುರ ಕಟ್ಟಿಕೊಂಡು, ಸಮಾಜಕ್ಕೆ ಒಳಿತನ್ನು ಮಾಡೊ ಮನಸ್ಥಿತಿ ಜನ ಕೂಡ ನಿಮ್ಮ ಮನೆ ಕದ ತಟ್ಟುವಾಗ ನಿಮ್ಮ ಲಾಭಕ್ಕಾಗಿ, ನಿಮ್ಮ ಕೆಟ್ಟ ಮನಸ್ಥಿತಿಯನ್ನು ಅವರ ಮೇಲೆ ಹೇರುವುದು ಎಷ್ಟರ ಮಟ್ಟಿಗೆ ಸರಿ?
        
          ಈಗಲೂ ನೀವು ಪ್ರಜಾಪ್ರಭುತ್ವದ  ನಾಲ್ಕನೇ ಅಂಗ ನಾ???