ಮೊನ್ನೆ ತಾನೇ ಹತ್ತನೇ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಮುಗಿಸಿ ಮನೆಗೆ ಬಂದ ನನಗೆ ಇಂದಿಗೂ ಕಾಡುವ ಪ್ರಶ್ನೆ ಎತ್ತ ಸಾಗುತ್ತಿದೆ ನಮ್ಮ ಮಕ್ಕಳ ಮನಸ್ಥಿತಿ ಅಂತ !
ಮಕ್ಕಳು ದೇವರ ಸಮಾನ , ಮಕ್ಕಳು ಮುಗ್ಧರು ಅವ್ರಿಗೆ ಏನು ಗೊತ್ತಿಲ್ಲ ಅಂತೆಲ್ಲ ನಾವು ಅಂದ್ಕೋತೀವಿ ನೋಡಿ ನಾವು ನಿಜವಾಗಲೂ ಮುಗ್ಧರು ಅವರಲ್ಲ! ಆಧುನಿಕತೆ , ಮಕ್ಕಳ ಮುಗ್ಧತೆಯನ್ನು ಕಬಳಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಹೆತ್ತವರ ದೃಷ್ಟಿಕೋನದಿಂದ ನೋಡಿದಾಗ ಎಲ್ಲ ಮಕ್ಕಳು ಒಳ್ಳೆಯವರೇ! ಆದರೆ ಕಳೆದ ೫ ವರ್ಷಗಳಿಂದ ಶಿಕ್ಷಕಿಯಾಗಿ ಮಕ್ಕಳ ಒಡನಾಟದಲ್ಲಿರುವ ನನಗೆ ಅವರನ್ನು ತುಂಬಾ ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶವೇನೋ ಸಿಕ್ಕಿತು. ಅದಕ್ಕೂ ಮುಂಚೆ ನಾನು ಕೂಡ ಮಕ್ಕಳೆಲ್ಲರೂ ಮುಗ್ಧರು ಅಂತಾನೇ ತಿಳ್ಕೊಂಡಿದ್ದೆ.
ಕೆಳದರ್ಜೆಯ ಮಧ್ಯಮ ವರ್ಗದ ಮಕ್ಕಳು ಇರುವ ಶಾಲೆಯಲ್ಲಿ ಕೆಲಸ ಮಾಡೋದರಿಂದ ಆ ಮಕ್ಕಳೆಲ್ಲ ಮುಗ್ಧರಾಗಿರುತ್ತಾರೆ ಹಾಗು ಶಿಕ್ಷಕರಿಗೆ ಸ್ವಲ್ಪ ಗೌರವ ಕೊಡಬಹುದು ಅನ್ನೋ ತಪ್ಪು ಕಲ್ಪನೆ ನನ್ನಲ್ಲಿತ್ತು. ಆದರೆ ಇಂದಿನ ಮಕ್ಕಳಿಗೆ ಹಲವಾರು ಅವಕಾಶಗಳು ಇರೋದರಿಂದ ಜ್ಞಾನವನ್ನು ಶಿಕ್ಷಕರ ಸಹಾಯವಿಲ್ಲದೆ ಪಡೆದುಕೊಳ್ಳಬಹುದು ಅನ್ನೋ ಮನೋಭಾವ! ಸಿಗುವ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಬಂದರೆ ಸಂತೋಷಾನೇ ... ಆದರೆ ನಿಜವಾಗಲೂ ಅದು ಆಗುತ್ತಾ?
ಒಳ್ಳೆ ವಿದ್ಯಾಭ್ಯಾಸ ಕೊಡಬೇಕು ಅಂತ ಹಗಲು ರಾತ್ರಿ ಕಷ್ಟ ಪಟ್ಟು ದುಡಿಯುವ ಹೆತ್ತವರ ಬಗ್ಗೆನೇ ಗೌರವ ಇಲ್ಲ. ಇನ್ನು ಶಿಕ್ಷಕರು ಏನು ನಿರೀಕ್ಷಿಸಲು ಸಾಧ್ಯ? ಹದಿಹರೆಯದ ವಯಸ್ಸೇ ಹಾಗೆ! ಯಾವುದರ ಕಡೆಗೆ ನಮ್ಮ ಗುರಿ ಇರಬೇಕೋ ಅದು ತೀರಾ ಕ್ಷುಲ್ಲಕವಾಗಿ ಕಾಣುತ್ತದೆ. ಯಾವುದು ನಮ್ಮ ಜೀವನವನ್ನು ಹಾಳು ಮಾಡುತ್ತದೋ ಅದೆಲ್ಲ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಮಕ್ಕಳಿಗೋಸ್ಕರ ದುಡ್ಡು ಮಾತ್ರ ಹೊಂದಿಸಿಕೊಡಬೇಕು ಅನ್ನೋ ಧಾವಂತ ಮಾತ್ರ ಈ ಹೆತ್ತವರಲ್ಲಿ ನಮಗೆ ಕಾಣುತ್ತೆ. ನಮ್ಮ ಮಕ್ಕಳಲ್ಲಿ ಒಳ್ಳೆ ಮೌಲ್ಯಗಳನ್ನು ಬಿತ್ತುವುದು ದುಡ್ಡಿಗಿಂತ ತುಂಬಾ ದೊಡ್ಡ ಕೆಲಸ ಅಂತ ಯಾರು ತಿಳ್ಕೊಳ್ಳೋದೇ ಇಲ್ಲ. ಅದಕ್ಕೆ ಈ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಅಡ್ಡ ದಾರಿ ತುಳಿಯುತ್ತಾರೆ. ಶಾಲಾ ಸಮಯದಲ್ಲಿ ಎಶ್ಟು ಒಳ್ಳೆಯ ಮೌಲ್ಯಗಳನ್ನು ಬಿತ್ತಿದರು ಕೂಡ ಅವರು ವಾಸಿಸುವ ಪರಿಸರ, ಅವರ ಸ್ನೇಹಿತರು ಸರಿ ಇಲ್ಲದಿದ್ದರೆ ನಾವು ಮಾಡುವ ಪ್ರಯತ್ನ ಎಲ್ಲವು ನೀರಿನ ಮೇಲೆ ಹೋಮ ಮಾಡಿದ ಹಾಗೆ.
ಇಂದಿನ ಕಾನೂನು , ಶಿಕ್ಷಣ ಪದ್ಧತಿ ಎಷ್ಟು ಮಕ್ಕಳಿಗೆ ಅನುಕೂಲ ಮಾಡಿ ಕೊಡುತ್ತದೋ ಅಷ್ಟು ಮಕ್ಕಳು ಅದರ ದುರ್ಬಳಕೆ ಮಾಡುತ್ತಾರೆ ಅನ್ನೋದು ಅಷ್ಟೇ ಸತ್ಯ ! ಯಾರು ಏನೇ ಹೇಳಿದರು ನಮ್ಮ ಬಾಲ್ಯಾನೇ ಚೆನ್ನಾಗಿತ್ತು ಅಲ್ವ? ಶಿಕ್ಷೆ ಇಲ್ಲದ ಶಿಕ್ಷಣ ಇಲ್ಲ ಅಂತ ಹೇಳ್ತಾರೆ. ಅಲ್ಲಿ ಶಿಕ್ಷೆನು ಇತ್ತು ಶಿಕ್ಷಣಾನು ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮೌಲ್ಯಗಳು ಕೂಡ ಇತ್ತು.
ಪಡೆಯುವ ಶಿಕ್ಷಣ ಕಡಿಮೆ ಇದ್ದರೂ ಜ್ಞಾನ ತುಂಬಾ ಹೆಚ್ಚು ಇರುತ್ತಿತ್ತು. ಜ್ಞಾನ ಸಂಪಾದನೆಗೆ ದಾರಿ ಗುರುಗಳ ಮೂಲಕ ಮಾತ್ರವಿತ್ತು. ಮುಂದೆ ಗುರಿ ಹಿಂದೆ ಗುರು ಎಂಬ ಮಾತು ತುಂಬಾ ಅನ್ವಯವಾಗ್ತಾ ಇತ್ತು. ಅದಕ್ಕೆ ಇಂದಿಗೂ ನಂಗೆ ಕಲಿಸಿದ ಗುರುಗಳ ಬಗ್ಗೆ ನಂಗೆ ತುಂಬಾ ಅಭಿಮಾನ ,ಗೌರವ !
ಪ್ರತಿ ವರ್ಷ ಒಂದು ಮಗುವನ್ನಾದರೂ ಒಳ್ಳೆ ವ್ಯಕ್ತಿಯಾಗಿ ಸಮಾಜಕ್ಕೆ ಕೊಡಬೇಕು ಅನ್ನೋದಷ್ಟೇ ಸದ್ಯಕ್ಕಿರುವ ನನ್ನ ಗುರಿ. ಆ ನಿಟ್ಟಿನಲ್ಲಿ ದಿನಾ ನೀತಿ ಪಾಠ ಮಾಡ್ತೀನಿ. ತಗೊಳ್ಳೋದು ಬಿಡೋದು ಅವರಿಗೆ ಸೇರಿದ್ದು.