ಮರೆಯಲಾಗದ ಈ ಪಯಣ
ಸ್ನೇಹಿತರೊಡನೆ , ನಮ್ಮ ಬದುಕಿನ ಭಾಗವಾಗಿರುವವರೊಡನೆ ಕಳೆಯುವ ಸಮಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅಂತಹ ದಿನ ಬದುಕಿನ ಪುಸ್ತಕದ ಪುಟ ಸೇರಿದ್ದು ಮೊನ್ನೆ ಶನಿವಾರದಂದು!
ಬೆಳಗಿನ ತುಂತುರು ಮಳೆಯ ಜೊತೆ ಜೊತೆಗೆ ನಮ್ಮ ಪಯಣ ಸಾಗಿದ್ದು ಮೈಸೂರಿನ ಅಧಿದೇವತೆ ಚಾಮುಂಡಿಯ ಸನ್ನಿಧಿಗೆ .. ಸುತ್ತಲೂ ಹಸಿರು ಹೊದ್ದ ಪ್ರಶಾಂತವಾದ ವಾತಾವರಣದಲ್ಲಿ ಸಾಗುವಾಗ ಮೂಡುವ ಭಾವ ವರ್ಣಿಸಲು ಪದಗಳೇ ಇಲ್ಲ. ಚಾಮುಂಡಿ ತಾಯಿಯ ಆಶೀರ್ವಾದ ಪಡೆದು ಸಾಗಿದ್ದು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಸೋಮನಾಥಪುರಕ್ಕೆ !
ಹೊಯ್ಸಳರ ಶಿಲ್ಪಕಲೆಯನ್ನು ಶತಮಾನಗಳಿಂದ ಶತಮಾನಗಳಿಗೆ ಪರಿಚಯಿಸಲು ನಿಂತ ಮಾರ್ಗದರ್ಶಿಯಂತೆ ಕಂಗೊಳಿಸುವ ಚೆನ್ನಕೇಶವ ದೇವಾಲಯದ ನೋಡಲು ಎರಡು ಕಣ್ಣುಗಳು ಸಾಲದು . ಪರಕೀಯರ ದಾಳಿಗೆ ನಲುಗಿ ಹೋದ ಶಿಲೆಗಳನ್ನು ನೋಡುವಾಗ ಮನಸ್ಸಿಗೆ ಖೇದವಾಗುತ್ತದೆ. ಧಾರ್ಮಿಕ ಸ್ಥಳವಾದರೂ ದೇವರಿಲ್ಲದ ಗುಡಿಯಾಗಿ, ಪರಕೀಯರ ಅಟ್ಟಹಾಸಕ್ಕೆ ಜ್ವಲಂತ ಸಾಕ್ಷಿಯಾಗಿ ನಿಂತಿದೆ ಈ ದೇವಾಲಯ . ಆದರೂ ಶಿಲ್ಪಕಲೆಯನ್ನು ಕಣ್ಣು ತುಂಬಿಕೊಂಡು ಹೊರಗೆ ಬಂದಾಗ ಮನದ ತುಂಬಾ ಅಭಿಮಾನ!
ಮುಂದಿನ ನಮ್ಮ ಪಯಣ ಸಾಗಿದ್ದು ಮಂಡ್ಯ ಜಿಲ್ಲೆಯ ಶಿವನಸಮುದ್ರದತ್ತ! ಕರ್ನಾಟಕದ ಜೀವನಾಡಿಯಾದ ಕಾವೇರಿ ನದಿಯು ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಕವಲುಗಳಾಗಿ ಬೀಳುವ ಪರಿಯಂತೂ ಅದ್ಭುತ! ದೂರಕ್ಕೆ ಕೇಳಿಸುತ್ತಿದ್ದ ನೀರಿನ ಭೋರ್ಗರೆತದ ಸದ್ದು ಮೊದಲಿನಂತೆ ಈ ಸಲ ಕೇಳಿಸಲಿಲ್ಲ. ಅಷ್ಟೇನೂ ವಿದ್ಯಾವಂತನಲ್ಲದ ಕಾರಿನ ಚಾಲಕ, ಮನುಷ್ಯನ ವರ್ತನೆಗಳೇ ಮಳೆಯ ಪ್ರಮಾಣ ಕಡಿಮೆಯಾಗಿ ಜಲಪಾತದ ಈ ಸ್ಥಿತಿಗೆ ಕಾರಣನಾಗಿದ್ದಾನೆ ಎಂದು ನೇರ ಆರೋಪ ಮಾಡಿದಾಗ ವಿದ್ಯಾವಂತ ಸಮಾಜ ಕಲಿಯಬೇಕಾದ್ದು ಬಹಳಷ್ಟಿದೆ ಎಂದು ಅನ್ನಿಸದೆ ಇರಲಿಲ್ಲ.
ಪ್ರವಾಸಕ್ಕೆ ಹೋಗುವ ವಿದ್ಯಾವಂತರ ದುರ್ವರ್ತನೆಗಳಿಂದ ಪ್ರಕೃತಿಯ ಮಡಿಲಲ್ಲಿ ಆಟವಾಡುವ ಅವಕಾಶ ತಪ್ಪಿಹೋಯಿತಾದರೂ ಧುಮ್ಮಿಕ್ಕುವ ನೀರ ಹೊಗೆಯಲ್ಲಿ ಕಳೆದುಹೋದದ್ದಂತೂ ಸುಳ್ಳಲ್ಲ! ಸುಂದರ ನೆನಪುಗಳೊಂದಿಗೆ,ಮಧುರ ಅನುಭೂತಿಯೊಂದಿಗೆ ಮನೆಗೆ ಮರಳುವಾಗ ಉಳಿದಿದ್ದು ಜೊತೆಯಾಗಿ ಕಳೆದ ಆ ಒಂದು ದಿನದ ಅನುಭವ!


