ಭಾನುವಾರ, ನವೆಂಬರ್ 22, 2015

ಕೃಷ್ಣ



ಕೃಷ್ಣ ನಿನ್ನ ತೋಳಿನಲ್ಲಿ
ರಾಧೆ ನುಡಿಸೋ ಕೊಳಲ ಗಾನ
ಪ್ರೇಮವೆಂಬ ವಿರಹ ಗೀತೆ
ರಾಗವಾಗಿ ಹೊಮ್ಮಿದೆ...


ನೀನೇ ನುಡಿಸಬಾರದೇ??

- ಸ್ಮಿತಾ

ನಿರ್ಮಿತಿ


ಗೆಜ್ಜೆಗಳ ದನಿಯಲ್ಲಿ
ಪುಟ್ಟ ಹೆಜ್ಜೆಗಳ ಇತಿ ಮಿತಿ
ಕಣ್ಣ ಭಾಷೆಯಲಿ ಮಾತು
ನೀ ಮಾತ್ರ ನಿರ್ಮಿತಿ!

ನಡೆವ ಸದ್ದಲ್ಲು ಹೊಮ್ಮುವ
ರಾಗ ತಾಳ ಲಯ
ನಿನ್ನ ಮಡಿಲಲಿ ಅರಳುವ
ಭಾವಾಭಿನಯ

ಪ್ರೀತಿಯಲಿ ನೀತಿಯಿದೆ
ಶಕ್ತಿ ಅದು ದ್ವರಿತ
ಶ್ರದ್ಧೆಯಲಿ  ಭಕ್ತಿಯಿದೆ
ಎಲ್ಲ ಅಪರಿಮಿತ

ಪುಟ್ಟ ಕಣ್ಣುಗಳಲ್ಲಿ
ನೂರಾರು ಆಸೆಗಳು
ತೊಡರುವಾ ಹೆಜ್ಜೆಯಲಿ
ನನಸಾಗೊ ದಿನಗಳು...

- ಸ್ಮಿತಾ 

ಮೋಡಿ

ಚಿತ್ರಕೃಪೆ : ಸತೀಶ್ ಕೆ ಎಸ್ 
ಬಾಳೆಂಬ ಬಾನಲ್ಲಿ ತೇಲಾಡಿ 
ಹುಟ್ಟು ಸಾವಿನ ಮಧ್ಯೆ ಓಲಾಡಿ 
ಮಂದಹಾಸದ ಬೆಳಕ ನೀಡಿ 
ನಿತ್ಯ ನಿರಂತರ ನಿನ್ನ ಮೋಡಿ !!

-ಸ್ಮಿತಾ  

ಯಾರ ನೋಡಿ ನಗುತಿರುವೆ ಮುದ್ದು ಮಗುವೇ?

ಚಿತ್ರಕೃಪೆ : ಸತೀಶ್ ಕೆ ಎಸ್ 
ಯಾರ ನೋಡಿ ನಗುತಿರುವೆ ಮುದ್ದು ಮಗುವೇ?
ಕಣ್ಣ ತುಂಬಾ ತುಂಬುತಿದೆ ನಿನ್ನ ನಗುವೇ...

ಸದಾ ಖುಷಿಯ ಚಿಮ್ಮಿಸುವ ಬೊಗಸೆ ಕಂಗಳು
ಬೆಳಕನೂ ನಾಚಿಸುವ ಬಿರಿದ ತುಟಿಗಳು...

ಏನೋ ಕಂಡು ನಾಚುತಿರುವ ಮುಖಭಾವದಲಿ
ತನ್ಮಯತೆಯ ಮೂರ್ತರೂಪ ಕುಳಿತ ಭಂಗಿಯಲಿ...

ನವಿಲನೂ ನಾಚಿಸುವ ವೈಯಾರದಲಿ
ಮೂಡಿಬಂದ ಬಿಂಬವಿದು ನನ್ನ ಕಣ್ಣಲಿ!

-ಸ್ಮಿತಾ

ಶುಕ್ರವಾರ, ನವೆಂಬರ್ 20, 2015

ಕನಸು


 ನಿನ್ನ ನೆರಳಿನ ಹಿಂದೆ ನನ್ನ ಕನಸುಗಳ ಮೆರವಣಿಗೆ 
ದೂರ ದೂರಕೆ ಸಾಗುತಿದೆ ಜೊತೆ ಜೊತೆಗೆ 
ತಂಬೆಲರ ಇಂಪಿನಲು ನಿನ್ನ ದನಿ ಕಂಪಿಸಲು 
ನನ್ನ ಮನಸಿನ ವೀಣೆ ಮಿಡಿಯದಿಹುದೇ?

                                              ಮಿಡಿದ ವೀಣೆಯಲಿ ನಾದ ಹೊಮ್ಮುವ ಕವನ 
                                                ಹೃದಯ ಬರೆಯಲಿ ಒಂದು ಪ್ರೇಮಗಾನ 
                                               ಮನದ ವೀಣೆಗೆ ತಾಳಹಾಕಲು ನಿನ್ನ ಹೃದಯ 
                                               ನನ್ನ ಬಾಳ ತುಂಬೆಲ್ಲ ನವೋದಯ!


                                                                                                              -ಸ್ಮಿತಾ

ಮಂಗಳವಾರ, ನವೆಂಬರ್ 17, 2015

ಯಾಕೆ ಹೀಗೆ ಹೇ ಕೃಷ್ಣಾ .....


ರಾಧೆಗಾಗಿ ಪ್ರೀತಿ ಕೊಟ್ಟೆ 
ರುಕ್ಮಿಣಿಗೆ ಬದುಕು ಕೊಟ್ಟೆ 
ನಿನ್ನೆದೆಯಲಿ ಯಾರನಿಟ್ಟೆ?

ಕೊಳಲ ಹಾಡು ರಾಧೆಗಾಗಿ 
ಬದುಕ ಹಾಡು ಮಡದಿಗಾಗಿ 
ಮನದ ಪ್ರೀತಿ ಯಾರಿಗಾಗಿ? 

ಕನಸೆಲ್ಲವೂ ರಾಧೆಗೆ 
ಕರ್ತವ್ಯವು ಪತ್ನಿಗೆ 
ಸ್ಥಾನವೇನು ಅವಳಿಗೆ? 

ನಿನ್ನ ಹೃದಯದಿ ಅವಳ ಸ್ಥಾನ 
ಅವಳ ಮನದಲಿ ನಿನದೆ ಧ್ಯಾನ 
ಹೇಳು ಅರ್ಥ ನೀನಿದಕೆ!

  ರಾಧಾ - ನಿಷ್ಕಲ್ಮಶ ಪ್ರೀತಿಗೆ  ಉದಾಹರಣೆ . ಕೃಷ್ಣನಲ್ಲಿ ಒಂದಾಗುವ ಆಸೆ ಬಿಟ್ಟರೆ ಇನ್ನೇನನ್ನು ಬಯಸದೆ ಬದುಕಿದ ರಾಧೆಗೆ ಕೃಷ್ಣ ಏನು ಕೊಟ್ಟ? ಪ್ರತಿಸಲ ರಾಧಾ ಕೃಷ್ಣನ ಫೋಟೋ ನೋಡಿದಾಗ ನನ್ನ ಮನದಲ್ಲಿ ಏಳೋ ಪ್ರಶ್ನೆ ಇದು. ಅದೇ ಈ ಕವನ !
                                                                                                                                                    -ಸ್ಮಿತಾ 

ಸೋಮವಾರ, ನವೆಂಬರ್ 16, 2015

ಹಳೆ ಪ್ರೇಮಿಯಂತೆ ಕಾಡೋ ಈ ಮಳೆ....


        ಭೂಮಿಯ ಒಡಲನು ತಂಪು ಮಾಡಲೇಬೇಕೆಂದು ಹಠ ತೊಟ್ಟು ಬಂದವನಂತೆ ಕಾಣುತ್ತಿದ್ದ ವರುಣ! ಹಗಲು ರಾತ್ರಿಯೆನ್ನದೆ ಸುರಿಯುವ ಜಿಟಿಜಿಟಿ ಮಳೆ ಭೂಮಿಯ ಒಡಲನ್ನು ತಂಪಾಗಿಸಿತೊ ಇಲ್ಲವೋ ಗೊತ್ತಿಲ್ಲ. ಆದರೆ ನನ್ನೆದೆಯಲ್ಲಿ ಸುಮ್ಮನಿರಲಾರದೆ ಸುಪ್ತವಾಗಿದ್ದ ನೆನಪುಗಳನ್ನು ಆಚೆ ಬರುವಂತೆ ಮಾಡಿದ್ದಂತೂ ನಿಜ. ಸದ್ದಿಲ್ಲದೆ ಸರಿದು ಹೋಗುವ ವಸಂತಗಳು ಸಾವಿರಾರು ಸುಂದರ ಕ್ಷಣಗಳನ್ನು ನನ್ನ ಪಾಲಿಗೆ ಉಳಿಸಿ ಹೋಗಿವೆ.

ಚಿತ್ರ ಕೃಪೆ: ಫೇಸ್ ಬುಕ್
        ಬಾಲ್ಯದ ದಿನಗಳಲ್ಲಿ,  ಆಕಾಶವೇ ಬಾಯಿ ಬಿಟ್ಟಂತೆ ಸುರಿಯುತ್ತಿದ್ದ ಮಳೆಯ ಸದ್ದು ಇಂದಿಗೂ ಕಿವಿಯಲ್ಲಿ ಕೇಳುವಂಥ ಅನುಭವ... ಮನೆಯವರ ಕಣ್ಣು ತಪ್ಪಿಸಿ ಮಳೆಯ ನಡುವೆ ಕುಣಿದಾಡುವಾಗ ಸಿಗುತ್ತಿದ್ದ ಖುಷಿ... ಕಾಗದದ ದೋಣಿಯನ್ನು ಹರಿವ ನೀರಲ್ಲಿ ಬಿಟ್ಟಾಗ ಸಿಗುತ್ತಿದ್ದ ಆನಂದ... ಗುಡುಗು ಮಿಂಚುಗಳ ಆರ್ಭಟದ ನಡುವೆ ಸುರಿವ ಮಳೆಯ ಸದ್ದಿಗೆ ಬದುಕಿನ ಜಂಜಾಟಗಳನ್ನೆಲ್ಲ ಮರೆತು ನಿದ್ರಿಸುತ್ತಿದ್ದ ದಿನಗಳು... ನೆಪ ಮಾತ್ರಕೆ ಕೊಡೆಯ ಹಿಡಿದು ಪೂರ್ತಿ ಒದ್ದೆಯಾಗುತ್ತ  ಶಾಲೆಯ ಮೆಟ್ಟಿಲು ಹತ್ತಿ ಇಡೀ ದಿನ ಚಳಿಯಲ್ಲಿ ನಡುಗುತ್ತಾ ಕುಳಿತುಕೊಳ್ಳುವಾಗ ಸಿಗುತ್ತಿದ್ದ ಭಾವ, ಜೀವನದಲ್ಲಿ ಇನ್ಯಾವುದರಲ್ಲೂ ಸಿಕ್ಕಿಲ್ಲ. ನನ್ನ ಮನದ ಭಾವಗಳಿಗೆ ಜೀವ ತುಂಬಿದ ಮಳೆ ತುಂಬಾ ಆಪ್ತವೆನಿಸುತ್ತದೆ. ಧೋ ಎಂದು ಸುರಿವ ಮಳೆಯಲ್ಲಿ ಕೊಡೆಯ ಅಡಿಯಲ್ಲಿ ನನ್ನ ಲೇಖನಿಯಲ್ಲಿ ಮೂಡಿ ಬಂದ ಮೊದಲ ಸಾಲುಗಳು.... ಯಾರೊಡನೆಯೂ ಹಂಚಿಕೊಳ್ಳಲಾಗದ ಸಮಸ್ಯೆಗಳನ್ನು ನೆನೆದು ಕಣ್ಣೀರಿಡುವಾಗ, ಎಷ್ಟೋ ಸರ್ತಿ ನನ್ನ ಕಣ್ಣೀರಿಗೆ ಜೊತೆಯಾದ ಮಳೆಯ ಋಣ ತೀರಿಸಲಾಗದ್ದು! ಮತ್ತದೇ ಮಳೆಯಲ್ಲಿ ಜೀವನದ ಮಹತ್ತರ ತಿರುವು... ಮರೆಯಲಾಗದ  ಬಂಧವನ್ನು ನನಗಿತ್ತ ಮಳೆ... ಇಂದಿಗೂ ಕಾಡುವ ಹಳೇ ಪ್ರೇಮಿಯಂತೆ ಈ ಮಳೆ...

ಚಿತ್ರ ಕೃಪೆ: ಸ್ಮಿತಾ
        ಹಚ್ಚ ಹಸಿರಿನ ನಡುವಿನ ಬದುಕು ಸಿಮೆಂಟ್ ಮಯವಾದಾಗ, ನಿಜವಾಗಲೂ ಪಡೆದ ಬದುಕಿನ ಖುಶಿಗಿಂತ ಅಗಲುವಿಕೆಯ ನೋವು ತುಂಬಾ ಕಾಡಿತ್ತು . ಹತ್ತು ವರುಷಗಳಲ್ಲಿ ಪ್ರತಿ ಮಳೆಗಾಲವೂ ನನ್ನ ಪಾಲಿಗೆ ವಿರಹಗೀತೆ! ಮಳೆ ನಿಂತು ಹೋದ ಮೇಲೆ ತೊಟ್ಟಿಕ್ಕುವ ನೀರನ್ನು ಬೊಗಸೆಯಲ್ಲಿ ಸೆರೆಹಿಡಿಯುವ ಆಸೆ ನಿತ್ಯ ನಿರಂತರ ! ತುಂತುರು ಮಳೆಯ ನಡುವೆ ಒಂದು ಪಯಣ, ಪ್ರೇಮಿಯೊಡನೆ ಕಾಲ ಕಳೆದಷ್ಟು ಸಂತೃಪ್ತಿ ಕೊಡುವಾಗ ಹೋಗದಿರಲು ಸಾಧ್ಯವೇ?

        ದಟ್ಟವಾದ ಮೋಡ ಆವರಿಸಿದೆ.... ಮತ್ತೆ ಮಳೆ ಬರುವಂತಿದೆ... ನೆನಪುಗಳು ಜೊತೆಯಾಗುತಿವೆ.... ಮಳೆಯಲೊಂದು ಸುತ್ತು ನಾ ಹೋಗಿ ಬರಲೇ...?

- ಸ್ಮಿತಾ

ಭಾನುವಾರ, ನವೆಂಬರ್ 15, 2015

ನಿನ್ನೊಲುಮೆಯಿಂದಲೇ


 ನಿನ್ನೊಲುಮೆಯಿಂದಲೇ ........   
                      
   ನಿನ್ನ ಪ್ರೀತಿಯ ತುಂತುರು ಮಳೆಯಲಿ 
       ನೆನೆವ ತನುವು ನನ್ನದು 
   ನಿನ್ನ ಬೆರಳ  ಸ್ಪರ್ಶಕೆ ಮಿಡಿಯುವ 
            ನನ್ನ ಹೃದಯವು ನಿನ್ನದು !

ನಿನ್ನ ಮಧುರ ಮಾತುಗಳಲಿ 
ತೆರೆದ  ಮನವು  ನನ್ನದು 
   ನಿನ್ನ ತೊಳಿನಾಸರೆಗೆ  ಕಾಯುವ 
ನನ್ನ ಭಾವನೆ  ನಿನ್ನದು !

ನಿನ್ನ   ಬಾಳಿನ ಒಂದು  ಪುಟದಲಿ
ಬಣ್ಣದ ಬದುಕು ನನ್ನದು 
     ನಿನ್ನಾನುರಾಗವ ಮಾತ್ರ ಬಯಸುವ 
ನನ್ನ ಜೀವವು ನಿನ್ನದು !

- ಸ್ಮಿತಾ

ಮುನ್ನುಡಿ

ಚಿತ್ರ ಕೃಪೆ : ಫೇಸ್ ಬುಕ್ 

     ಬಾಳೆಂಬ ಕಡಲಿನಲ್ಲಿ ಜೊತೆಯಾಗಿ ನನ್ನೊಡನೆ ಹೆಜ್ಜೆ ಹಾಕುವ ಅಕ್ಷರಗಳ ಸಾಲು ಸಾಲುಗಳನ್ನು ಇಂದಿನಿಂದ ನಿಮಗೆ ಪರಿಚಯಿಸುವ ಆಸೆ . ಮನದ ಮೂಲೆಯಲ್ಲಿ ಕಾಡುವ ಭಾವಗಳನ್ನು ಪೋಣಿಸಿ ನಿಮ್ಮ ಮುಂದೆ ಇಡುವ ತವಕ. ಎಲ್ಲ ಬಂಧಗಳ ನಡುವೆ ಬಂಧಿಯಾಗಿದ್ದರೂ ಬಂಧಿಸಲಾಗದ ಭಾವನೆಗಳನ್ನು ನಿಮ್ಮ ಜೊತೆ ಹಂಚುವ ಕಾತರ...

ನಿಮ್ಮ ಅನಿಸಿಕೆಗಳು ನಾ ಹಿಡಿಯೋ ಲೇಖನಿಗೆ ಹುರುಪು ನೀಡಿದರೆ, ನಿಮಗೆ ನಾ ಆಭಾರಿ. ...

- ಸ್ಮಿತಾ