ಭಾನುವಾರ, ಫೆಬ್ರವರಿ 14, 2016

ಮುದ್ದು ಗೆಳೆಯಾ...
                          ನಿನ್ನ ಆತ್ಮೀಯವಾಗಿ ಕರೆಯಲು ನನ್ನಲ್ಲಿ ಪದಗಳೇ ಇಲ್ಲ ಕಣೊ.. ಏನು ಕರೆದರೂ ಕಮ್ಮಿ ಅನ್ನಿಸುತ್ತದೆ. ಇಂದು ಜಗತ್ತೆಲ್ಲ ಆಚರಿಸುವ ಪ್ರೇಮಿಗಳ ದಿನ. ಆದರೆ ನನಗೆ ಅಂಥ ವಿಶೇಷವೇನೂ ಅನ್ನಿಸುತ್ತಿಲ್ಲ. ಕಾರಣ ಪ್ರತಿದಿನ ಪ್ರತಿಘಳಿಗೆ ನನ್ನ ಪ್ರತಿ ಉಸಿರಲೂ ನಿನ್ನನ್ನೇ ಉಸಿರಾಡುವಾಗ ಈ ಒಂದು ದಿನದ ಅಗತ್ಯ ಮಹತ್ವವಾದದ್ದು ಅನ್ನಿಸುತ್ತಿಲ್ಲ.
                           ನಿನ್ನ ಮಾತು ತುಂಬಾ ಚಂದ ... ಕೇಳ್ತಾನೆ ಇರೋಣ ಅನ್ಸೋ ಅಷ್ಟು! ಆದರೆ ಶಬ್ದವೇ ಕೇಳಿಸದಷ್ಟು ದೂರದಲ್ಲಿ ಇದ್ದೀಯ ನೀನು!
                            ನೀ ಎದುರು ನಿಂತಾಗ ನನ್ನ ನಾನೇ ಮರೆಯೋ ಅಷ್ಟು ಮುದ್ದು ಮುದ್ದು! ಆದರೆ ಬರೇ ಕನಸಲ್ಲಿ ಮಾತ್ರ ನಿನ್ನ ಆಗಮನ ! ನಿನ್ನ ಆ ಮಾಂತ್ರಿಕ ಸ್ಪರ್ಶ ...ನಿನ್ನಲ್ಲಿ  ನಾ ಕಳೆದು ಹೋಗುವಷ್ಟು!
                             ಮಾರ್ದವತೆ ತುಂಬಿದ ಆ ಮಾತು, ಆರ್ದ್ರವಾದ ಹೃದಯದಲ್ಲಿ ನೆಲೆ ನಿಂತು  ವಸಂತಗಳು ಕಳೆದು ಹೋದರೂ ಇನ್ನು ಹಚ್ಚ ಹಸಿರು!
                             ಈ ಹಳಿಗಳ ತರಹ ನಾವಿಬ್ಬರೂ ಹತ್ತಿರ ಇದ್ದರೂ ಸೇರಲಾರದಷ್ಟು ದೂರ ದೂರ !
ಕಣ್ಣು ಹಾಯಿಸಿದಷ್ಟು ದೂರ ಬರೇ ಕತ್ತಲು ! ಮನವ ಬೆಳಗುವ ರವಿ ಹುಟ್ಟೊದೇ ಇಲ್ಲ ನನ್ನ ಬಾಳಲ್ಲಿ ಎನ್ನುವ ಭಾವ! ಬಿರು ಬೇಸಗೆಯಿಂದ   ಬೇಸತ್ತ ಭೂಮಿ ವರುಣ ಕೃಪೆಗಾಗಿ ಕಾಯುವಂತೆ ನನ್ನ ಮನ ನಿನಗಾಗಿ ಕಾಯುತಿದೆ !
                         ಎಲ್ಲ ಪ್ರೇಮಿಗಳಂತೆ ಜೊತೆಯಾಗಿ ಪಾರ್ಕ್ ನಲ್ಲಿ ಅಲೆದಾಡಿಲ್ಲ , ಒಂದೆ ಒಂದು ಸಿನೆಮಾ ನೋಡಿಲ್ಲ,  ಭೇಟಿಯಾಗಿಲ್ಲ! ಆದರೂ ಮನಸ್ಸಿಗೆ ತುಂಬ ಆತ್ಮೀಯನಾಗಿ ನಿಂತವನು ನೀನು .. ಸ್ನೇಹ ಮತ್ತು ಪ್ರೀತಿಯ ನಡುವಿನ ಎಳೆಯನ್ನು ಬಿಡಿ ಬಿಡಿಯಾಗಿ ಬಿಡಿಸಿಟ್ಟು ಭಾವನೆಗಳಲ್ಲಿ ಬಂಧಿಸಿದವನು ನೀನು... ಹೃದಯದ ಸುತ್ತ ಭದ್ರವಾದ ಬೇಲಿಯಲ್ಲಿ ನಿನ್ನ ಬಂಧಿಸಿಡುವ ಬಯಕೆ ನನಗೆ.. ಆದರೆ???  ಎಂದೂ ಒಂದಾಗದ ಹಳಿಗಳಂತಹ ಬದುಕು ನಮ್ಮದು!!!!!
                            ಕಲ್ಪನೆಗಳು ಹೀಗೂ ಉಂಟೆ ?????

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ