ಭೂಮಿಯ ಒಡಲನು ತಂಪು ಮಾಡಲೇಬೇಕೆಂದು ಹಠ ತೊಟ್ಟು ಬಂದವನಂತೆ ಕಾಣುತ್ತಿದ್ದ ವರುಣ! ಹಗಲು ರಾತ್ರಿಯೆನ್ನದೆ ಸುರಿಯುವ ಜಿಟಿಜಿಟಿ ಮಳೆ ಭೂಮಿಯ ಒಡಲನ್ನು ತಂಪಾಗಿಸಿತೊ ಇಲ್ಲವೋ ಗೊತ್ತಿಲ್ಲ. ಆದರೆ ನನ್ನೆದೆಯಲ್ಲಿ ಸುಮ್ಮನಿರಲಾರದೆ ಸುಪ್ತವಾಗಿದ್ದ ನೆನಪುಗಳನ್ನು ಆಚೆ ಬರುವಂತೆ ಮಾಡಿದ್ದಂತೂ ನಿಜ. ಸದ್ದಿಲ್ಲದೆ ಸರಿದು ಹೋಗುವ ವಸಂತಗಳು ಸಾವಿರಾರು ಸುಂದರ ಕ್ಷಣಗಳನ್ನು ನನ್ನ ಪಾಲಿಗೆ ಉಳಿಸಿ ಹೋಗಿವೆ.
![]() |
| ಚಿತ್ರ ಕೃಪೆ: ಫೇಸ್ ಬುಕ್ |
ಬಾಲ್ಯದ ದಿನಗಳಲ್ಲಿ, ಆಕಾಶವೇ ಬಾಯಿ ಬಿಟ್ಟಂತೆ ಸುರಿಯುತ್ತಿದ್ದ ಮಳೆಯ ಸದ್ದು ಇಂದಿಗೂ ಕಿವಿಯಲ್ಲಿ ಕೇಳುವಂಥ ಅನುಭವ... ಮನೆಯವರ ಕಣ್ಣು ತಪ್ಪಿಸಿ ಮಳೆಯ ನಡುವೆ ಕುಣಿದಾಡುವಾಗ ಸಿಗುತ್ತಿದ್ದ ಖುಷಿ... ಕಾಗದದ ದೋಣಿಯನ್ನು ಹರಿವ ನೀರಲ್ಲಿ ಬಿಟ್ಟಾಗ ಸಿಗುತ್ತಿದ್ದ ಆನಂದ... ಗುಡುಗು ಮಿಂಚುಗಳ ಆರ್ಭಟದ ನಡುವೆ ಸುರಿವ ಮಳೆಯ ಸದ್ದಿಗೆ ಬದುಕಿನ ಜಂಜಾಟಗಳನ್ನೆಲ್ಲ ಮರೆತು ನಿದ್ರಿಸುತ್ತಿದ್ದ ದಿನಗಳು... ನೆಪ ಮಾತ್ರಕೆ ಕೊಡೆಯ ಹಿಡಿದು ಪೂರ್ತಿ ಒದ್ದೆಯಾಗುತ್ತ ಶಾಲೆಯ ಮೆಟ್ಟಿಲು ಹತ್ತಿ ಇಡೀ ದಿನ ಚಳಿಯಲ್ಲಿ ನಡುಗುತ್ತಾ ಕುಳಿತುಕೊಳ್ಳುವಾಗ ಸಿಗುತ್ತಿದ್ದ ಭಾವ, ಜೀವನದಲ್ಲಿ ಇನ್ಯಾವುದರಲ್ಲೂ ಸಿಕ್ಕಿಲ್ಲ. ನನ್ನ ಮನದ ಭಾವಗಳಿಗೆ ಜೀವ ತುಂಬಿದ ಮಳೆ ತುಂಬಾ ಆಪ್ತವೆನಿಸುತ್ತದೆ. ಧೋ ಎಂದು ಸುರಿವ ಮಳೆಯಲ್ಲಿ ಕೊಡೆಯ ಅಡಿಯಲ್ಲಿ ನನ್ನ ಲೇಖನಿಯಲ್ಲಿ ಮೂಡಿ ಬಂದ ಮೊದಲ ಸಾಲುಗಳು.... ಯಾರೊಡನೆಯೂ ಹಂಚಿಕೊಳ್ಳಲಾಗದ ಸಮಸ್ಯೆಗಳನ್ನು ನೆನೆದು ಕಣ್ಣೀರಿಡುವಾಗ, ಎಷ್ಟೋ ಸರ್ತಿ ನನ್ನ ಕಣ್ಣೀರಿಗೆ ಜೊತೆಯಾದ ಮಳೆಯ ಋಣ ತೀರಿಸಲಾಗದ್ದು! ಮತ್ತದೇ ಮಳೆಯಲ್ಲಿ ಜೀವನದ ಮಹತ್ತರ ತಿರುವು... ಮರೆಯಲಾಗದ ಬಂಧವನ್ನು ನನಗಿತ್ತ ಮಳೆ... ಇಂದಿಗೂ ಕಾಡುವ ಹಳೇ ಪ್ರೇಮಿಯಂತೆ ಈ ಮಳೆ...
![]() |
| ಚಿತ್ರ ಕೃಪೆ: ಸ್ಮಿತಾ |
ಹಚ್ಚ ಹಸಿರಿನ ನಡುವಿನ ಬದುಕು ಸಿಮೆಂಟ್ ಮಯವಾದಾಗ, ನಿಜವಾಗಲೂ ಪಡೆದ ಬದುಕಿನ ಖುಶಿಗಿಂತ ಅಗಲುವಿಕೆಯ ನೋವು ತುಂಬಾ ಕಾಡಿತ್ತು . ಹತ್ತು ವರುಷಗಳಲ್ಲಿ ಪ್ರತಿ ಮಳೆಗಾಲವೂ ನನ್ನ ಪಾಲಿಗೆ ವಿರಹಗೀತೆ! ಮಳೆ ನಿಂತು ಹೋದ ಮೇಲೆ ತೊಟ್ಟಿಕ್ಕುವ ನೀರನ್ನು ಬೊಗಸೆಯಲ್ಲಿ ಸೆರೆಹಿಡಿಯುವ ಆಸೆ ನಿತ್ಯ ನಿರಂತರ ! ತುಂತುರು ಮಳೆಯ ನಡುವೆ ಒಂದು ಪಯಣ, ಪ್ರೇಮಿಯೊಡನೆ ಕಾಲ ಕಳೆದಷ್ಟು ಸಂತೃಪ್ತಿ ಕೊಡುವಾಗ ಹೋಗದಿರಲು ಸಾಧ್ಯವೇ?
ದಟ್ಟವಾದ ಮೋಡ ಆವರಿಸಿದೆ.... ಮತ್ತೆ ಮಳೆ ಬರುವಂತಿದೆ... ನೆನಪುಗಳು ಜೊತೆಯಾಗುತಿವೆ.... ಮಳೆಯಲೊಂದು ಸುತ್ತು ನಾ ಹೋಗಿ ಬರಲೇ...?
ದಟ್ಟವಾದ ಮೋಡ ಆವರಿಸಿದೆ.... ಮತ್ತೆ ಮಳೆ ಬರುವಂತಿದೆ... ನೆನಪುಗಳು ಜೊತೆಯಾಗುತಿವೆ.... ಮಳೆಯಲೊಂದು ಸುತ್ತು ನಾ ಹೋಗಿ ಬರಲೇ...?
- ಸ್ಮಿತಾ


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ